ಬೆಸ್ಸಿ, ಚಾಲ್ರ್ಸ್ ಎಡ್ವಿನ್  
1845-1915.  ಅಮೆರಿಕದ ಪ್ರಸಿದ್ಧ ಸಸ್ಯ ವಿಜ್ಞಾನಿ.  ಒಹಾಯೊ ರಾಜ್ಯದ ಮಿಲ್ಟನ್ ಎಂಬಲ್ಲಿ 1845 ಮೇ 21ರಂದು ಜನಿಸಿದ.  ಪ್ರಾಂತೀಯ ಶಾಲೆಗಳಲ್ಲಿ ಶಿಕ್ಷಣ ಮುಗಿಸಿದ ಬಳಿಕ 1866ರಲ್ಲಿ ಮಿಷಿಗನ್ ಅಗ್ರಿಕಲ್ಚರಲ್ ಕಾಲೇಜು ಸೇರಿ 1869ರಲ್ಲಿ ಪದವಿ ಪಡೆದ.  ಅನಂತರ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮುಂದುವರಿಸಿ ಸಸ್ಯ ವಿಜ್ಞಾನದಲ್ಲಿ ಪರಿಣತಿ ಗಳಿಸಿದ.  1870-84 ಅವಧಿಯಲ್ಲಿ ಅಯೋವಾ ಸ್ಟೇಟ್ ಅಗ್ರಿಕಲ್ಚರಲ್ ಕಾಲೇಜಿನಲ್ಲಿ (ಅಯೋವಾ ಸ್ಟೇಟ್ ಯೂನಿವರ್ಸಿಟಿ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ) ಸಸ್ಯವಿಜ್ಞಾನ ಪ್ರಾಧ್ಯಾಪಕನಾಗಿದ್ದ.  ಅನಂತರ 1884ರಲ್ಲಿ ನೆಬ್ರಾಸ್ಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹುದ್ದೆ ಸ್ವೀಕರಿಸಿ ಅಲ್ಲಿಯೇ ತನ್ನ ಸಂಶೋಧನೆ ಮುಂದುವರಿಸಿ ಅನೇಕ ಲೇಖನಗಳನ್ನೂ ಪುಸ್ತಕಗಳನ್ನೂ ಪ್ರಕಟಿಸಿದ.  

	ಬೆಸ್ಸಿ ಸಸ್ಯವಿಜ್ಞಾನ ಪ್ರಗತಿಗಾಗಿ ಶ್ರುಮಿಸಿದ ಆದಿ ಪರಿಶೋಧಕ.  ಸಸ್ಯಗಳ ಪ್ರಾಚೀನತೆ ಮತ್ತು ಅವುಗಳ ಅಭಿವೃದ್ಧಿಗೆ ಸಂಬಂಧಿಸಿದ ಹೊಸ ಅಭಿಪ್ರಾಯಗಳನ್ನು ಮಂಡಿಸಿದ.  ಬೆಂತಮ್-ಹೂಕರ್ ವರ್ಗೀಕರಣ ವಿಧಾನವನ್ನು ವಿಶ್ಲೇಷಿಸಿ ನವೀಕರಿಸಿ.  ಅನಾವೃತ ಬೀಜಸಸ್ಯಗಳನ್ನು ಆವೃತ ಬೀಜಸಸ್ಯಗಳಿಂದ ಬೇರ್ಪಡಿಸಿ, ಆವೃತ ಬೀಜಸಸ್ಯಗಳನ್ನು ಪುನರ್‍ವ್ಯವಸ್ಥೆಗೊಳಿಸಿ, ಅವನ್ನು ಒಂದು ನೂತನ ಕ್ರಮದಲ್ಲಿ ಅಳವಡಿಸಿದ.  ಸಸ್ಯವರ್ಗೀಕರಣ ಕ್ಷೇತ್ರದಲ್ಲಿ ಅನೇಕ ಪ್ರಯೋಗಿಕ ಪ್ರಯತ್ನಗಳನ್ನು ನಡೆಸಿ 1915ರಲ್ಲಿ ಹೊಸ ಒಂದು ವಿಧಾನ ನಿರೂಪಿಸಿದ.  ಹೂ ಬಿಡುವ ಸಸ್ಯಗಳ ಕುಲವಿಕಾಸ ಆಧಾರಿತ ವರ್ಗೀಕರಣ ಪದ್ಧತಿ (ದಿ ಫೈಲೋಜೆನೆಟಿಕ್ ಟ್ಯಾಕ್ಸಾನಮೀ ಆಫ್ ಫ್ಲವರಿಂಗ್ ಪ್ಲ್ಯಾಂಟ್ಸ್) `ಬೆಸ್ಸಿಯನ್ ಪದ್ಧತಿ' ಎಂದು ಪ್ರಸಿದ್ಧವಾಗಿದೆ.  ಈತನ ಮುಖ್ಯ ಗ್ರಂಥಗಳು: ಬಾಟನಿ (1884); ಎವೊಲ್ಯೂಷನ್ ಅಂಡ್ ಕ್ಲಾಸಿಫಿಕೇಷನ್ (1893); ಪ್ಲ್ಯಾಂಟ್ಸ ಮೈಗ್ರೇಷನ್ ಸ್ಟಡೀಸ್ (1905), ಔಟ್‍ಲೈನ್ಸ್ ಆಫ್ ಪ್ಲ್ಯಾಂಟ್ ಫೈಲಾ (1909); ಎಸೆನ್‍ಷಿಯಲ್ಸ್ ಆಫ್ ಕಾಲೇಜ್ ಬಾಟನಿ (1914). 

	1915 ಫೆಬ್ರುವರಿ 25ರಂದು ನೆಬ್ರಾಸ್ಕಾದ ಲಿಂಕನ್‍ನಲ್ಲಿ ನಿಧನನಾದ.
 (ಎಂ.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ